* *ಸಂಸತ್‌ನಲ್ಲಿ ಮೃಣಾಲ್ ಬೆಳಗಾವಿ ಧ್ವನಿಯಾಗಿ ಕೆಲಸ ಮಾಡಲಿದ್ದಾನೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*
* *ಗೆಜಪತಿ, ಬಡಸ್.ಕೆ.ಎಚ್, ಕುಕಡೊಳ್ಳಿ, ಬೆಂಡಿಗೇರಿ, ನಾಗೇರಹಾಳ ಗ್ರಾಮಗಳಲ್ಲಿ ಸಚಿವರಿಂದ ಮತಯಾಚನೆ*
*ಬೆಳಗಾವಿ* : ಜನರ ಕಷ್ಟ ಸುಖಗಳ ಬಗ್ಗೆ ಅರಿವಿರುವ ಮೃಣಾಲ್ ಹೆಬ್ಬಾಳ್ಕರ್, ಕ್ಷೇತ್ರದ ಅಭಿವೃದ್ಧಿಗೆ ತನ್ನದೇ ಆದ ಕನಸು ಕಟ್ಟಿಕೊಂಡಿದ್ದಾನೆ. ಬೆಳಗಾವಿ ಧ್ವನಿಯಾಗಿ ಸಂಸತ್‌ನಲ್ಲಿ ಕೆಲಸ ಮಾಡಲಿದ್ದಾನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಶನಿವಾರ ಸಂಜೆ ಗೆಜಪತಿ, ಬಡಸ್.ಕೆ.ಎಚ್, ಕುಕಡೊಳ್ಳಿ, ಬೆಂಡಿಗೇರಿ, ನಾಗೇರಹಾಳ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಮತಯಾಚಿಸಿದ ಸಚಿವರು, ಆಶೀರ್ವಾದ ಮಾಡಿ ಅವನನ್ನು ಸಂಸತ್‌ಗೆ ಕಳುಹಿಸಿಕೊಡಿ ಎಂದು ವಿನಂತಿಸಿಕೊಂಡರು.
* *ಉತ್ತಮ ಸಂಸ್ಕೃತಿ ಕಲಿತಿದ್ದಾನೆ*
ನಾನು ಅಧಿಕಾರ ಇರಲಿ, ಬಿಡಲಿ ಜನರೊಂದಿಗೆ ಬೆರತು, ಉತ್ತಮ ರೀತಿ ನಡೆದುಕೊಳ್ಳುತ್ತಿದ್ದೇನೆ. ನನ್ನ ಮಗನಿಗೂ ಉತ್ತಮ ನಡತೆ, ಸಂಸ್ಕೃತಿಯನ್ನು ಕಲಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಬೆಳಗಾವಿಯಿಂದ, ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಚಿಕ್ಕೋಡಿಯಿಂದ ಕಣಕ್ಕಿಳಿಸಲಾಗಿದೆ. ಇಬ್ಬರು ಯುವ ಅಭ್ಯರ್ಥಿಗಳಿಗೆ ಜನರು ಆಶೀರ್ವಾದ ಮಾಡಬೇಕು ಎಂದು ಹೇಳಿದರು.
* *ಬದ್ಧತೆಗೆ ಮತ್ತೊಂದು ಹೆಸರೇ ಕಾಂಗ್ರೆಸ್*
ಕಾಂಗ್ರೆಸ್ ಪಕ್ಷ ಎಂದರೆ ಬದ್ಧತೆ, ಬದ್ಧತೆ ಎಂದರೆ ಕಾಂಗ್ರೆಸ್. ಬಡ ಜನರು ಭರವಸೆ ಹೊಂದಿರುವ ಪಕ್ಷ ನಮ್ಮದು. ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ಎರಡು ಸಾವಿರ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್ ಹೀಗೆ ತಿಂಗಳಿಗೆ ಒಂದು ಕುಟುಂಬಕ್ಕೆ ಸರ್ಕಾರದಿಂದ 5 -6 ಸಾವಿರ ರೂ ಹಣದ ರೂಪದಲ್ಲಿ ಬರುತ್ತಿದೆ. ಅಂದರೆ ಒಂದು ವರ್ಷಕ್ಕೆ 60 ಸಾವಿರ ರೂಪಾಯಿ ಸಿಗುತ್ತಿದೆ ಎಂದರು. ಒಬ್ಬ ರೈತ ಬಿಸಿಲು, ಮಳೆಯಲ್ಲಿ ಕೆಲಸಮಾಡಿ 20 ಟನ್ ಕಬ್ಬು ಬೆಳೆದರೂ ನಿಿರೀಕ್ಷಿತ ಆದಾಯ ನೋಡಲು ಆಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬಡ ಜನರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡ ರಾಜಕಾರಣಿಗಳು ಎಂದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್. ಕಳೆದ 10 ತಿಂಗಳಿಂದ ಕಾಂಗ್ರೆಸ್ ಸರ್ಕಾರ ಜನ ಮೆಚ್ಚುವಂಥ ಕೆಲಸಗಳನ್ನು ಮಾಡಿಕೊಂಡು ಬಂದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಈ ಭಾಗದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ನನಗೆ ಬೆಂಬಲ ನೀಡಿದ ರೀತಿಯಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ಗೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
*15 ಲಕ್ಷ ಬಂದಿಲ್ಲ ಎಂದು ಬಿಜೆಪಿಗರನ್ನು ಪ್ರಶ್ನಿಸಿ*
ಕಳೆದ 10 ವರ್ಷಗಳ ಹಿಂದೆ ಪ್ರತಿ ಅಕೌಂಟ್‌ಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದಿದ್ದ ಮೋದಿ ಇದುವರೆಗೂ ಒಂದು ಪೈಸೆ ಕೊಟ್ಟಿಲ್ಲ. ಈ ಬಗ್ಗೆ ಚುನಾವಣಾ ಪ್ರಚಾರಕ್ಕೆ ಬರುವ ಬಿಜೆಪಿಯವರ ಹತ್ತಿರ ಪ್ರಶ್ನಿಸಿ ಎಂದು ಹೇಳಿದರು.
* *ಮನೆ ಮಗ ಬೇಕೋ, ಹೊರಗಿನ ವ್ಯಕ್ತಿ ಬೇಕೋ?*
ಹುಬ್ಬಳ್ಳಿ-ಧಾರವಾಡ ಜನರಿಂದ ತಿರಸ್ಕರಿಸಲ್ಪಟ್ಟು, ಹಾವೇರಿಯಿಂದ ಟಿಕೆಟ್ ಸಿಗದೆ ಇದೀಗ ಬೆಳಗಾವಿಗೆ ವಲಸೆ ಬಂದಿರುವ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಬೇಕೋ, ನಿಮ್ಮ ಮನೆ ಮಗ ಮೃಣಾಲ್ ಹೆಬ್ಬಾಳ್ಕರ್ ಬೇಕೋ ಎಂದು ನೀವೇ ನಿರ್ಧರಿಸಿ ಎಂದು ಸಚಿವರು ಹೇಳಿದರು.
ಬಿಜೆಪಿ ಅಭ್ಯರ್ಥಿ ಗೆದ್ದರೆ ಅವರನ್ನು ಹುಡುಕಿಕೊಂಡು ಹುಬ್ಬಳ್ಳಿಗೆ ಹೋಗಬೇಕು. ಮೃಣಾಲ್ ಗೆದ್ದರೆ ನಿಮ್ಮ ಮನೆ ಮುಂದಕ್ಕೆ ಬರುತ್ತಾನೆ. ಕಾಂಗ್ರೆಸ್ -ಬಿಜೆಪಿ ಅಭ್ಯರ್ಥಿಗಿರುವುದು ಇಷ್ಟೇ ವ್ಯತ್ಯಾಸ ಎಂದು ಹೇಳಿದರು.
ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ, ಸ್ಥಳೀಯ ಕಾಂಗ್ರೆಸ್ ಮುಖಂಡರು, ಗ್ರಾಮದ ಯುವಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.