ಮಹಿಳೆಯರು ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ನಿಮ್ಮೆಲ್ಲರ ಸಹಕಾರ ಬೇಕು: ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ
ಯಮಕನಮರಡಿ: ಮಹಿಳೆಯರು ಎಲ್ಲ ಕ್ಷೇತ್ರಗಳ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಅದಕ್ಕೆ ನಿಮ್ಮೆಲ್ಲರ ಸಹಕಾರವೂ ಬೇಕು. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷದ ವರಿಷ್ಠರು ನನ್ನನ್ನು ಸೇರಿ ರಾಜ್ಯದಲ್ಲಿ ಆರು ಜನ ಮಹಿಳೆಯರಿಗೆ ಲೋಕಸಭೆ ಟಿಕೆಟ್ ನೀಡಿದ್ದಾರೆ ಎಂದು ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಕುರಿಹಾಳ, ಬೋಡಕೇನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ಯುವ ವರ್ಗವನ್ನು ರಾಜಕೀಯವಾಗಿ ಬೆಳೆಸಬೇಕೆಂದು ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದು, ನಿವೆಲ್ಲರೂ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ನನ್ನನ್ನು ಆಶೀರ್ವದಿಸುವ ಮೂಲಕ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತರು, ಬಡವರು ಮತ್ತು ಮಹಿಳೆಯರು ಸೇರಿದಂತೆ ಎಲ್ಲ ವರ್ಗಗಳಿಗೆ ಸಮಾನ ಸ್ಥಾನಮಾನ ನೀಡಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಸರ್ವರನ್ನು ಅಭಿವೃದ್ಧಿಯತ್ತ ಕೊಂಡ್ಯೊಯ್ಯುತ್ತಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ತಿಳಿಸಿದರು.
ಇದೇ ವೇಳೆ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಮಹಿಳೆಯರು ಅದ್ದೂರಿಯಾಗಿ ಸ್ವಾಗತಿಸಿ, ಸತ್ಕರಿಸಿದರು.
ಈ ಸಂದರ್ಭದಲ್ಲಿ ಕುರಿಹಾಳ, ಬೋಡಕೇನಹಟ್ಟಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು, ಮಹಿಳೆಯರು, ಯುವಕ, ಯುವತಿಯರು ಇದ್ದರು.