*ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*
* *ಅರಭಾವಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ*
*ಅರಭಾವಿ** : ಬಡವರ ಅಭಿವೃದ್ಧಿ, ಮಹಿಳೆಯರ ಸಬಲೀಕರಣಕ್ಕಾಗಿ ಚಿಂತಿಸುವ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯ ಸರ್ಕಾರದ ಕೈ ಬಲಪಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದರು.
ಅರಭಾವಿ ಪಟ್ಟಣದಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಸಮುದಾಯ ಭವನದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ನುಡಿದಂತೆ ನಡೆದ ಸರ್ಕಾರ ನಮ್ಮದು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ ಎಂದರು. ಅರಭಾವಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
*ಬಿಜೆಪಿ ಅಭ್ಯರ್ಥಿಯಿಂದ ಬೆಳಗಾವಿಗೆ ಅನ್ಯಾಯ*
ಬೆಳಗಾವಿ ಜಿಲ್ಲೆಗೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸಾಕಷ್ಟು ಅನ್ಯಾಯ ಎಸಗಿದ್ದಾರೆ ಎಂದು ಸಚಿವರು ಆರೋಪಿಸಿದರು. ಬೆಳಗಾವಿಗೆ ಬರಬೇಕಿದ್ದ ಐಐಟಿ ಕಾಲೇಜು, ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗಳನ್ನು ತಡೆದರು, ಕರೋನಾ ವೇಳೆ ಹುಬ್ಬಳ್ಳಿಗೆ ಆಕ್ಸಿಜನ್ ಸಿಲಿಂಡರ್ ಗಳನ್ನು ಕೊಂಡೊಯ್ದರು ಎಂದು ಸಚಿವೆ ಟೀಕಿಸಿದರು. ಇದೀಗ ಬೆಳಗಾವಿಯನ್ನು ನನ್ನ ಕರ್ಮಭೂಮಿ ಅಂತಾರೆ. ಇಂತಹ ದ್ವಂದ್ವ ವ್ಯಕ್ತಿ ನಮಗೆ ಬೇಕಾ ಎಂದು ಪ್ರಶ್ನಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಶೆಟ್ಟರ್ ಅವರ ಹಿರಿತನಕ್ಕೆ ಬೆಲೆ ಕೊಟ್ಟು ಎಂಎಲ್ಸಿ ಮಾಡಲಾಯಿತು. ಆದ್ರೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ವಾಪಸಾಗಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಟೀಕಾಸ್ತ್ರ ಮಾಡುತ್ತಿದ್ದ ಜಗದೀಶ್ ಶೆಟ್ಟರ್, ಇದೀಗ ಮೋದಿ ನೋಡಿ ವೋಟ್ ಕೊಡಿ ಅಂತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಚುನಾವಣೆಗೂ ಮುನ್ನ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಇದು ಬಡವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿರುವ ಕಳಕಳಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಕರ್ನಾಟಕದ ಜನರ ಹಸಿವನ್ನು ನೀಗಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
*ಜನರಿಂದ ಉತ್ತಮ ಸ್ಪಂದನೆ*
ಪ್ರಚಾರಕ್ಕೆ ಹೋದಲೆಲ್ಲಾ ಕಡೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ್ ಹೇಳಿದರು.
ಹಿಂದೆ 2014 ರಲ್ಲಿ ನನ್ನ ತಾಯಿ ಲೋಕಸಭೆಗೆ ಸ್ಪರ್ಧಿಸಿದ್ದಾಗ ಅವರಿಗೆ ಅರಭಾವಿ ಕ್ಷೇತ್ರದಲ್ಲಿ ಮುನ್ನಡೆ ಸಿಕ್ಕಿತ್ತು. ಈ ಬಾರಿ ನಿಮ್ಮ ಮನೆ ಮಗ ಸ್ಪರ್ಧಿಸಿದ್ದು, ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಜಿಲ್ಲೆಯ ಮಗನಾದ ನನ್ನನ್ನು ಬೆಂಬಲಿಸಿ, ಹೊರಗಿನ ಅಭ್ಯರ್ಥಿ ಚುನಾವಣೆ ಆಗೋವರೆಗೂ ಮಾತ್ರ ಇರುತ್ತಾರೆ. ನಂತರ ನಾವೇ ಅವರನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ನಿಮ್ಮ ಸ್ನೇಹಿತ, ಸಹೋದರನಾಗಿ ಕೆಲಸ ಮಾಡುವೆ ಎಂದು ಮೃಣಾಲ್ ಹೇಳಿದರು. ಬೆಳಗಾವಿ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆ ಮಾಡೋಣ, ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
*ಮೃಣಾಲ್ ಹೆಬ್ಬಾಳ್ಕರ್ ಹುಟ್ಟುಹಬ್ಬ ಅಚರಣೆ*
ಸಮಾರಂಭದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಹುಟ್ಟುಹಬ್ಬವನ್ನು ಆಚರಿಸಲಾಯಿತು . ಸ್ಥಳೀಯ ಕಾರ್ಯಕರ್ತರು ಮೃಣಾಲ್ ಕೈಯಿಂದ ಕೇಕ್ ಕತ್ತರಿಸಿ, ಹುಟ್ಟುಹಬ್ಬ ಆಚರಿಸಿದರು. ಮೃಣಾಲ್ ಹೆಬ್ಬಾಳ್ಕರ್ ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಹಾರೈಸಿದರು. ಕೇಕ್ ಕತ್ತರಿಸುವ ವೇಳೆ ಮೃಣಾಲ್ ಅವರ ಮಾವ ಶಿವಕುಮಾರ್ ಹಾಜರಿದ್ದರು.
ಈ ವೇಳೆ ಮುಖಂಡರಾದ ಭೀಮಪ್ಪ ಹಂದಿಗುಂದ್, ಅನಿಲ್ ಕುಮಾರ್ ದಳವಾಯಿ, ಕೌಜಲಗಿ ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಅರಳಿ, ರಮೇಶ್ ಉಟಗಿ, ಲಕ್ಕಣ್ಣ ಸವಸುದ್ದಿ, ಬಾಬಾ ಜಮಖಂಡಿ, ಮಾಯಾಪ್ಪ ಕಂಚಿನಮಟ್ಟಿ, ಗಣಪತಿ ಈಡಿಗೇರ, ಮಾರುತಿ ಅಲೋಷಿ,ಮಾಯಪ್ಪ ಬೆನಚನಮರಡಿ, ಕರಿಯಪ್ಪ ಗೌಡಿ, ಸುರೇಶ್ ಪೂಜಾರಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.