ಚೆಕ್ ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ

Kuntinath
WhatsApp Group Join Now
Telegram Group Join Now

ಲೋಕಸಭಾ ಚುನಾವಣೆ: ಅಧಿಕಾರಿಗಳ ಸಭೆ
—————————-
ಚೆಕ್ ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ

ಬೆಳಗಾವಿ, ಏ.9(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮತ್ತು ಅಂತರ್ ರಾಜ್ಯ ಗಡಿಯಲ್ಲಿರುವ ಚೆಕ್ ಪೋಸ್ಟ್ ಗಳಲ್ಲಿ ಇನ್ನೂ ಹೆಚ್ಚಿನ ನಿಗಾವಹಿಸುವ ಮೂಲಕ ಅಕ್ರಮ ಹಣ, ಮದ್ಯ ಅಥವಾ ಇತರೆ ವಸ್ತುಗಳ ಸಾಗಾಣಿಕೆಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದರು.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ(ಏ.9) ನಡೆದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳಗಾವಿ ಜಿಲ್ಲೆಯು ಗೋವಾ ಹಾಗೂ ಮಹಾರಾಷ್ಟ್ರ ಗಡಿಗಳನ್ನು ಹೊಂದಿರುವುದರಿಂದ ಅಕ್ರಮ ನಗದು ಹಾಗೂ ವಸ್ತುಗಳ ಸಾಗಾಣಿಕೆ ಹೆಚ್ಚಿರುವ ಸಾಧ್ಯತೆಗಳಿರುತ್ತವೆ. ಚುನಾವಣಾ ಆಯೋಗ ಕೂಡ ಈ ಬಗ್ಗೆ ನಿರಂತರವಾಗಿ ಎಚ್ಚರಿಕೆ ನೀಡಿರುತ್ತದೆ. ಆದ್ದರಿಂದ ಚೆಕ್ ಪೋಸ್ಟ್ ಗಳಲ್ಲಿ ನಿಯೋಜಿಸಿರುವ ತಂಡಗಳು ಈ ನಿಟ್ಟಿನಲ್ಲಿ ಸದಾ ಜಾಗ್ರತರಾಗಿರಬೇಕು ಎಂದು ತಿಳಿಸಿದರು.

ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿರುವ ಎಫ್.ಎಸ್.ಟಿ., ವಿ.ಎಸ್.ಟಿ. ತಂಡಗಳು ಆಯಾ ಮತಕ್ಷೇತ್ರಗಳಲ್ಲಿ ನಿರಂತರವಾಗಿ ಸಂಚರಿಸುವುದು ಕಡ್ಡಾಯವಾಗಿರುತ್ತದೆ. ಈ ಬಗ್ಗೆ ಸಹಾಯಕ ಚುನಾವಣಾಧಿಕಾರಿಗಳು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪೊಲೀಸ್, ಅಬಕಾರಿ, ವಾಣಿಜ್ಯ ತೆರಿಗೆ ಸೇರಿದಂತೆ ವಿವಿಧ ಇಲಾಖೆಗಳ ತಂಡಗಳು ಜಂಟಿಯಾಗಿ ಗೋದಾನುಗಳು ಸೇರಿದಂತೆ ಇತರೆ ಸಂಶಯಾಸ್ಪದ ಸ್ಥಳಗಳಲ್ಲಿ ಅನೀರಿಕ್ಷಿತವಾಗಿ ಪರಿಶೀಲನೆ ಕೈಗೊಳ್ಳಬೇಕು.

ಯಾವುದೇ ಕಾರಣಕ್ಕೂ ಅಕ್ರಮ ಮದ್ಯ, ನಗದು ಅಥವಾ ವಸ್ತುಗಳ ಸಾಗಾಣಿಕೆ ಅಥವಾ ವಿತರಣೆ ಆಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಹಾಯಕ ಚುನಾವಣಾಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನಿರ್ದೇಶನ ನೀಡಿದರು.

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳು ಸಿಬ್ಬಂದಿ, ಪೊಲೀಸ್, ಚಾಲಕರು ಸೇರಿದಂತೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸುವಾಗ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ನಡೆಸಬೇಕು ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಸೂಚನೆ ನೀಡಿದರು.
ವಾಹನಗಳ ಒಳಗಡೆ ಕೂಡ ಸೂಕ್ಷ್ಮವಾಗಿ ತಪಾಸಣೆ ಮಾಡಬೇಕು. ವಾಹನಗಳಲ್ಲಿ ಏನಾದರೂ ಮಾಡಿಫಿಕೇಷನ್ ಕಂಡುಬಂದರೆ ಅದನ್ನು ಕೂಡ ಪರಿಶೀಲಿಸಬೇಕು ಎಂದು ತಿಳಿಸಿದರು.
ಅಗತ್ಯ ಸೇವೆಗಳಲ್ಲಿ ನಿರತರಾಗಿರುವ ಎಲ್ಲ ಅಧಿಕಾರಿಗಳು/ಸಿಬ್ಬಂದಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಕಡ್ಡಾಯವಾಗಿ ಅಂಚೆಮತದಾನ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ವಾಹನಗಳ ಸಮರ್ಪಕ ತಪಾಸಣೆಗೆ ನಿರ್ದೇಶನ:

ಜಿಲ್ಲೆಯ ಪ್ರತಿಯೊಂದು ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ಕಾಟಾಚಾರಕ್ಕೆ ಪರಿಶೀಲಿಸದೇ ಸಮರ್ಪಕವಾಗಿ ಪರಿಶೀಲನೆ ನಡೆಸಬೇಕು. ಪ್ರಯಾಣಿಕರ ವಾಹನಗಳ ಜತಗೆ ಸರಕು ಸಾಗಾಣಿಕೆ ವಾಹನಗಳನ್ನು ಕೂಡ ಕಡ್ಡಾಯವಾಗಿ ಹಾಗೂ ಕೂಲಂಕುಶವಾಗಿ ತಪಾಸಣೆ ನಡೆಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ‌.ಭೀಮಾಶಂಕರ ಗುಳೇದ ತಿಳಿಸಿದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಐಎಎಸ್ ಪ್ರೋಬೇಷನರಿ ಅಧಿಕಾರಿ ಶುಭಂ ಶುಕ್ಲಾ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತರಾದ ಪಿ.ಎನ್.ಲೋಕೇಶ್ ಸೇರಿದಂತೆ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
****

WhatsApp Group Join Now
Telegram Group Join Now
Share This Article