ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಿರುವುದರಿಂದ ಅಬಕಾರಿ ಪೊಲೀಸ್ ಅಧಿಕಾರಿಗಳಿಂದ ಗುರುವಾರ ವಿವಿಧೆಡೆ ದಾಳಿ ನಡೆಸಿ ಅಪಾರ ಮೌಲ್ಯದ ಮದ್ಯ ವಶಪಡಿಸಿಕೊಂಡು 04 ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎನ್.ಮಂಜುನಾಥ ಅವರು ತಿಳಿಸಿದ್ದಾರೆ.
ಬಳ್ಳಾರಿ ತಾಲ್ಲೂಕಿನ ಚಾನಾಳ್ ಗ್ರಾಮದ ಚಾನಾಳ್ ಕ್ರಾಸ್ನಲ್ಲಿ ರಸ್ತೆಗಾವಲು ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ 21.600 ಲೀ ಮದ್ಯ ಮತ್ತು 7.920 ಲೀ. ಬಿಯರ್ (ಅಂದಾಜು ಮೌಲ್ಯ ರೂ.89650) ಅನ್ನು ಸಾಗಾಣೆ ಮಾಡುತ್ತಿರುವುದನ್ನು ಜಪ್ತಿ ಮಾಡಿ, ವಾಹನ ಸಾವರನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಹಲಕುಂದಿ ಚೆಕ್ ಪೋಸ್ಟ್ ನಲ್ಲಿ ರಾಂಪುರ ಕಡೆಯಿಂದ ಬರುವ ಬಸ್ಸಿನಲ್ಲಿ ವ್ಯಕ್ತಿಯೋರ್ವನು 01 ಲೀಟರ್ ಸಾಮಥ್ರ್ಯದ 12 ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸೇಂದಿ 12.000 ಲೀಟರ್ (ಅಂದಾಜು ಮೌಲ್ಯ ರೂ.600) ಅನಧೀಕೃತವಾಗಿ ಸಾಗಾಟ ಮಾಡುತ್ತಿರುವುದನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಲಾಗಿದೆ.
ಬಳ್ಳಾರಿ ನಗರದ ರೂಪನಗುಡಿ ರಸ್ತೆಯಲ್ಲಿ ಅಬಕಾರಿ ಪೊಲೀಸ್ ಅಧಿಕಾರಿಗಳು ಗಸ್ತು ಸಮಯದಲ್ಲಿ ಕಪ್ಪು ಬಣ್ಣದ ತ್ರಿಚಕ್ರ ವಾಹನದಲ್ಲಿ 25.920 ಲೀ. ಜಪ್ತು ವಸ್ತುಗಳ (ಅಂದಾಜು ಮೌಲ್ಯ ರೂ. 36520) ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಸಾವರನ್ನು ವಶಕ್ಕೆ ಪಡೆದುಕೊಂಡು ಮದ್ಯ ಮತ್ತು ಆಟೋವನ್ನು ಜಪ್ತುಮಾಡಿ ಪ್ರಕರಣ ದಾಖಲಿಸಲಾಗಿದೆ.
ಬಳ್ಳಾರಿ ತಾಲ್ಲೂಕಿನ ಬೊಮ್ಮನಹಾಳ್ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಸಮಯದಲ್ಲಿ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ 17.280 ಲೀ (ರೂ.7680 ಮೌಲ್ಯದ) ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾರರಿಗೆ ಆಮಿಷ ಒಡ್ಡಲು ಮತ್ತು ಅನಧಿಕೃತವಾಗಿ ವಸ್ತುಗಳನ್ನು ನೀಡುವುದು. ದಾಖಲೆಯಿಲ್ಲದ ಹಣವನ್ನು ಸಾಗಾಣೆ ಮಾಡುವುದು ಸೇರಿದಂತೆ ಆಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡದೇ ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಹದ್ದಿನ ಕಣ್ಣಿಡಲಾಗಿದೆ. ಇದರ ಭಾಗವಾಗಿ ಬಳ್ಳಾರಿ ಜಿಲ್ಲೆ ಅಂತರ್ರಾಜ್ಯ ಗಡಿ ಮತ್ತು ಅಂತರ್ಜಿಲ್ಲಾ ಗಡಿಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ತೀವ್ರ ಬಿಗಿಯಾದ ಕ್ರಮವನ್ನು ಕೈಗೊಂಡಿದೆ ಅಲ್ಲದೇ, ಎಚ್ಚರಿಕೆಯನ್ನು ವಹಿಸಲಾಗಿದೆ.
ಚುನಾವಣೆ ಅಕ್ರಮಗಳ ಮೇಲೆ ಕಣ್ಗಾವಲು ಇಡಲು ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ, ಅಲ್ಲಿ ವಿವಿಧ ತಂಡಗಳನ್ನು ನೇಮಿಸಲಾಗಿದೆ. ಇಲ್ಲಿನ ಕಾರ್ಯಚಟುವಟಿಕೆಗಳ ನೇರ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಸಿಸಿ ಕ್ಯಾಮೆರಾ ಆಳವಡಿಸಿ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಣೆ ಮಾಡುವುದು ಆಪ್ ಮೂಲಕವೂ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು, ಎಂಸಿಸಿ ತಂಡದ ಮುಖ್ಯಸ್ಥರು ವೀಕ್ಷಣೆ ಮಾಡಲಿದ್ದಾರೆ.
ಜಿಲ್ಲೆಯಲ್ಲಿ 7, ಅಂತರ್ಜಿಲ್ಲೆ ಗಡಿಯಲ್ಲಿ 4 ಮತ್ತು ಅಂತರರಾಜ್ಯ ಆಂಧ್ರಪ್ರದೇಶ ಗಡಿಭಾಗದಲ್ಲಿ 13 ಸೇರಿ 24 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
5 ಕ್ಷೇತ್ರದಲ್ಲಿ 24 ಚೆಕ್ ಪೋಸ್ಟ್ ಸ್ಥಾಪನೆ
ಜಿಲ್ಲೆಯಾದ್ಯಂತ ಒಟ್ಟು 24 ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಪ್ರತಿ ಚೆಕ್ ಪೋಸ್ಟ್ ನಲ್ಲಿ 3 ಎಸ್ಎಸ್ಟಿ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ಫ್ಲೈಯಿಂಗ್ ಸ್ಕ್ವ್ಯಾಡ್ ಮತ್ತು ವಿಡಿಯೋ ಕಣ್ಗಾವಲು ತಂಡಗಳನ್ನು ನೇಮಕ ಮಾಡಲಾಗಿದೆ.