ಮೇಲಿನವರ ಮುಖ ನೋಡಿ ಓಟು ಕೊಡಿ ಎನ್ನುತ್ತಾರೆ, ಇವರೇನು ಮಾಡುತ್ತಾರೆ? – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನೆ

Kuntinath
WhatsApp Group Join Now
Telegram Group Join Now

ಪ್ರತಿ ಬಾರಿ ಮೇಲಿನವರ ಮುಖ ನೋಡಿ ಓಟು ಕೊಡಿ ಎನ್ನುತ್ತಾರೆ, ಇವರೇನು ಮಾಡುತ್ತಾರೆ? – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನೆ

ಸವದತ್ತಿ: ಕೇವಲ ಮೇಲಿನವರ ಮುಖ ನೋಡಿ ಓಟು ಕೊಡಿ ಎನ್ನುವವರನ್ನು 10 ವರ್ಷ ನೋಡಿದ್ದೀರಿ. ಇನ್ನೂ ಅದನ್ನೇ ನೋಡುತ್ತ ಇರಲು ಸಾಧ್ಯವಿಲ್ಲ, ನಮ್ಮನ್ನು ಪ್ರತಿನಿಧಿಸುವವರು ಏನಾದರೂ ಕೆಲಸ ಮಾಡಬೇಕಲ್ವಾ? ಹಾಗಾಗಿ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಗೆ ಮತ ನೀಡಿ. ನಿಮಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗಾವಿ ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಸವದತ್ತಿ ವಿಧಾನಸಭಾ ಕ್ಷೇತ್ರದ ಹೂಲಿ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಮೃಣಾಲ ಹೆಬ್ಬಾಳಕರ್ ಪರ ಚುನಾವಣೆಯ ಪ್ರಚಾರದಲ್ಲಿ ಅವರು ಮಾತನಾಡಿದರು.

ಕರ್ನಾಟಕದ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಗೃಹಲಕ್ಷ್ಮೀ ಯೋಜನೆಯ ಜವಾಬ್ದಾರಿ ಹೊತ್ತುಕೊಂಡು 1.20 ಕೋಟಿ ಮಹಿಳೆಯರಿಗೆ ಹಣ ತಲುಪಿಸುವ ಪುಣ್ಯದ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಎಲ್ಲಾ ಕುಟುಂಬಗಳಿಗೆ ಒಂದಲ್ಲ ಒಂದು ಗ್ಯಾರಂಟಿ ಯೋಜನೆಯ ಪ್ರಯೋಜನ ಸಿಗುತ್ತಿದೆ. ನಾವು ಬಡ ಜನರಿಗೆ 10 ಕಿಲೋ ಅಕ್ಕಿ ಕೊಡಬೇಕೆಂದು ನಿರ್ಧರಿಸಿದ್ದೆವು. ಆದರೆ ಬಿಜೆಪಿಯ ಕೇಂದ್ರ ಸರಕಾರ ಅಕ್ಕಿ ಕೊಡಲು ಒಪ್ಪಲಿಲ್ಲ. ಹಾಗಾಗಿ ನೇರವಾಗಿ ಹಣ ನೀಡುತ್ತಿದ್ದೇವೆ. ಸಾಮಾಜಿಕ ಬದ್ದತೆ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ. ಬಡವರನ್ನು ಬೆಲೆ ಏರಿಕೆ ಬಿಸಿಯಿಂದ ಪಾರು ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಮಗೆ ಒಬ್ಬ ಕೆಲಸ ಮಾಡುವ ಸಂಸದ ಬೇಕಾಗಿದ್ದಾರೆ. ಕೇಂದ್ರ ಸರಕಾರದಿಂದ ಕೆಲಸಗಳನ್ನು ತರಬೇಕಿದೆ. ಅಂತಹ ಸಾಮರ್ಥ್ಯ ಹೊಂದಿರುವ ಮೃಣಾಲ ಹೆಬ್ಬಾಳಕರ್, ಬರಗಾಲದಂತಹ ಸಂದರ್ಭದಲ್ಲಿ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಲು ಧ್ವನಿ ಎತ್ತುವ ಕೆಲಸವನ್ನು ಮಾಡಲಿದ್ದಾರೆ. ಪ್ರಸ್ತುತ ಲೋಕಸಭೆಯ ಒಬ್ಬ ಸಂಸದ ಕೂಡ ಕೇಂದ್ರದಲ್ಲಿ ಧ್ವನಿ ಎತ್ತಲಿಲ್ಲ. ಹಾಗಾಗಿ ನಿಮಗೆ ನ್ಯಾಯ ಒದಗಿಸುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದು ಅವರು ಭರವಸೆ ನೀಡಿದರು.
ಮೃಣಾಲ ಹೆಬ್ಬಾಳಕರ್ ಮಾತನಾಡಿ, ನನಗೆ ಮತ ನೀಡಿ ಗೆಲ್ಲಿಸಿದಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ನಿಮ್ಮ ಋುಣವನ್ನು ತೀರಿಸುತ್ತೇನೆ ಎಂದು ತಿಳಿಸಿದರು. ಶಾಸಕ ವಿಶ್ವಾಸ್ ವೈದ್ಯ ಮಾತನಾಡಿ, ಯುವಕನಾಗಿರುವ ಮೃಣಾಲ್ ಹೆಬ್ಬಾಳಕರ್ ಅವರನ್ನು ಎಲ್ಲರೂ ಬೆಂಬಲಿಸಿ ಲೋಕಸಭೆಗೆ ಆರಿಸಿ ಕಳಿಸೋಣ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಆರ್.ವಿ.ಪಾಟೀಲ, ಎ.ಬಿ.ಕುಲಕರ್ಣಿ, ಸುರೇಶ್ ಫಡಿಗೌಡ್ರ, ಸುಭಾಷ್ ಚಿಕ್ಕರೆಡ್ಡಿ, ಯಲ್ಲಪ್ಪ ಕರಿಕಟ್ಟಿ, ವಿ.ಎಸ್.ತೋರಗಲ್, ಡಿ.ಡಿ.ಟೋಪೋಜಿ, ಕಾಶಪ್ಪ ಕಾರ್ಲಕಡ್ಡಿ, ಸಂಗಪ್ಪ ಸುತಗಟ್ಟಿ, ಗೋವಿಂದ ಪಾಟೀಲ, ಶೇಖರ್ ಕಾಕಾ, ಹನುಮರೆಡ್ಡಿ ಯಮನೂರು, ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article