ಅಸಮಾನತೆ ಕಾರಣಕರ್ತರಿಗೆ ಉತ್ತರ ಕೊಡುವ ಸಮಯ ಬಂದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Kuntinath
WhatsApp Group Join Now
Telegram Group Join Now

*ಅಸಮಾನತೆ ಕಾರಣಕರ್ತರಿಗೆ ಉತ್ತರ ಕೊಡುವ ಸಮಯ ಬಂದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

* *ಬಾರ್ ಅಸೋಸಿಯೇಷನ್ ನಲ್ಲಿ ಮತಯಾಚಿಸಿದ ಸಚಿವರು*

*ಬೆಳಗಾವಿ* : ಹುಬ್ಬಳ್ಳಿ -ಧಾರವಾಡಕ್ಕೆ ಹೋಲಿಸಿದರೆ ಬೆಳಗಾವಿ ಜಿಲ್ಲೆಗೆ ಆಗಿರುವ ಅಸಮಾನತೆಗೆ ಕಾರಣರಾದವರಿಗೆ ಉತ್ತರ ಕೊಡುವ ಸಮಯ ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಬೆಳಗಾವಿ ಬಾರ್ ಅಸೋಸಿಯೇಷನ್ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವರು, ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡಿದವರನ್ನು ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೇ ಏನೂ ಮಾಡದವರು ಈಗ ಬೆಳಗಾವಿಗೆ ಬಂದು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಏನೂ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಬದಲಾಗಿ ಹೈಕೋರ್ಟ್ ಪೀಠ, ಐಐಐಟಿ, ಆಕ್ಸಿಜನ್ ಸಿಲೆಂಡರ್ ವಿಷಯದಲ್ಲಿ ಅನ್ಯಾಯ ಮಾಡಿದರು. ಈಗ ಬಂದು ಏನು ಮಾಡುತ್ತಾರೆ? ಕೇವಲ ಅಧಿಕಾರದ ಹಿಂದೆ ಓಡಾಡುವ ಇಂಥ ವ್ಯಕ್ತಿ ಜಿಲ್ಲೆಗೆ ಬೇಕಾ ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ, ಆ ಪಕ್ಷದ ಮುಖಂಡರನ್ನೇ ನಿಂದಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬಂದರು. ಕೇವಲ ಮೂರು ತಿಂಗಳ ಹಿಂದಷ್ಟೇ ಬಿಜೆಪಿ ನಾಯಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದ ವ್ಯಕ್ತಿ ಇಂದು ಏಕಾಏಕಿ ಬಿಜೆಪಿ ಸೇರಿ ಮೋದಿ ಅವರನ್ನು ಪ್ರಧಾನಿ ಮಾಡಬೇಕೆಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ದ್ವಂದ್ವ ನಿಲುವು, ಅಧಿಕಾರ ಬೇಕೇ ಬೇಕು ಎಂಬ ಹಪಾಹಪಿಯವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ಮಂತ್ರಿಯಾದರು. ಇವರಿಗೆ ಅಧಿಕಾರವೇ ಮುಖ್ಯ ಎಂದು ಆರೋಪಿಸಿದರು. ಪ್ರಹ್ಲಾಜ ಜೋಶಿ, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಚೆ, ರಮೇಶ ಜಿಗಜಿಣಗಿ, ಜಗದೀಶ್ ಶೆಟ್ಟರ್ ಸೇರಿದಂತೆ ಡಜನ್ ಗಟ್ಟಲೆ ಬಿಜೆಪಿ ಅಭ್ಯರ್ಥಿಗಳು ಚುನಾವಣೆಗೂ ಮೊದಲೇ ಕೇಂದ್ರದಲ್ಲಿ ಮಂತ್ರಿಯಾಗುವ ಕನಸಿನಲ್ಲಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವ್ಯಂಗ್ಯವಾಡಿದರು.

ಬೆಳಗಾವಿ ಭಾವನೆಗಳ ಬಗ್ಗೆ, ಬೇಡಿಕೆಗಳ ಬಗ್ಗೆ ಇವರಿಗೇನು ಗೊತ್ತಿದೆ? ಬೆಳಗಾವಿ ಬಹಳ ವಿಭಿನ್ನವಾಗಿದೆ. ಸ್ಥಳೀಯರಿಗೆ ಗೊತ್ತಿರುತ್ತದೆ. ಬಿಜೆಪಿ ಅಭ್ಯರ್ಥಿ ಇದು ನನಗೆ ಕೊನೆಯ ಚುನಾವಣೆ ಎನ್ನುತ್ತಿದ್ದಾರೆ. ಮತ್ತೆ ಚುನಾವಣೆಗೆ ನಿಲ್ಲುವ ಬಯಕೆ ಇಲ್ಲದವರಿಗೆ ಕೆಲಸ ಮಾಡುವ ಹಸಿವಿರುವುದಿಲ್ಲ. ಅವರಿಗೆ ಕೇವಲ ಅಧಿಕಾರ ದಾಹ ಎಂದು ಹೇಳಿದರು.
ಜನರ ಮನಸ್ಸನ್ನು ಅರಿತು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಅವನು ಜಜನಾಯಕನಾಗಲು ಸಾಧ್ಯ. ಮೃಣಾಲ್‌ ಹೆಬ್ಬಾಳ್ಕರ್ ಖಂಡಿತ ಉತ್ತಮ ನಾಯಕನಾಗುತ್ತಾನೆ ಎಂದು ಸಚಿವರು ಹೇಳಿದರು.
ಲಕ್ಷ್ಮೀ ಹೆಬ್ಬಾಳಕರ್ ಖಾನಾಪುರದವರು ಎನ್ನುವ ಮುರುಗೇಶ್ ನಿರಾಣಿ ರಾಜಕೀಯ ಹೇಳಿಕೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಬೆಳಗಾವಿಯಲ್ಲೇ ಹುಟ್ಟಿ ಬೆಳೆದವಳು. ಕಳೆದ 27 ವರ್ಷದಿಂದ ಇಲ್ಲೇ ಮನೆ ಮಾಡಿ ಉಳಿದುಕೊಂಡಿದ್ದೇನೆ. ನನ್ನ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಎಲ್ಲವೂ ಇಲ್ಲೆ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ‌ ಫಿರೋಜ್ ಸೇಠ್, ಮುಂದಿನ 40 ವರ್ಷ ಮೃಣಾಲ್‌ ಸಂಸದನಾಗಿ ನಮ್ಮೆಲ್ಲರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದಾನೆ. ಬೆಳಗಾವಿ ಅಭಿವೃದ್ಧಿಗೆ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಹೇಳಿದರು.
ಶಾಸಕ ರಾಜು ಸೇಠ್ ಮಾತನಾಡಿ, ಮೃಣಾಲ ಒಬ್ಬ ಸೌಜನ್ಯತೆ ಹೊಂದಿರುವ ವ್ಯಕ್ತಿ. ತಾಯಿಯವರ ನಿಷ್ಠೆ, ಶ್ರಮ ನೋಡಿ ಕಲಿತಿದ್ದಾನೆ. ಮುಂದೆ ಒಳ್ಳಯ ಸಂಸದನಾಗಿ ಕೆಲಸ ಮಾಡಲಿದ್ದಾನೆ ಎಂದರು.
ಜಗದೀಶ ಶೆಟ್ಟರ್ 2 ವರ್ಷದ ಹಿಂದೆ ಬೆಳಗಾವಿಯಿಂದ ವಿಮಾನ ಸೇವೆಗಳನ್ನೆಲ್ಲ ಹುಬ್ಬಳ್ಳಿಗೆ ಕಿತ್ತುಕೊಂಡು ಹೋಗಿದ್ದರು. ಜಿಲ್ಲೆಗೆ ಅವರಿಂದ ಸಾಕಷ್ಟು ಅನ್ಯಾಯವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್, ಒಬ್ಬ ಸೈನಿಕನಂತೆ ನಾನು ಬೆಳಗಾವಿಗಾಗಿ ಲೋಕಸಭೆಯಲ್ಲಿ ಹೋರಾಟ ನಡೆಸಲಿದ್ದಾನೆ. ಜಿಲ್ಲೆಗೆ ಆಗಿರುವ ಅನ್ಯಾಯವನ್ನು ನಿವಾರಿಸಲು ಪ್ರಯತ್ನ ಮಾಡುತ್ತೇನೆ. ಒಂದು ಬಾರಿ ಅವಕಾಶ ಕೊಟ್ಟು ನೋಡಿ. ನಿಮ್ಮೆಲ್ಲರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.

* *ಬೆಳಗಾವಿಯ ಅಭಿವೃದ್ಧಿ ವಿರೋಧಿ ಜಗದೀಶ್ ಶೆಟ್ಟರ್: ಕಿವುಡಸಣ್ಣನವರ*

ಬಿಜೆಪಿ ಅಭ್ಯರ್ಥಿ, ‌ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ತೆಗೆದುಕೊಂಡ‌ ಏಕಪಕ್ಷೀಯ ನಿರ್ಧಾರಗಳಿಂದ ಬೆಳಗಾವಿಯಲ್ಲಿ ವಕೀಲರ ವೃತ್ತಿಗೆ ಸಾಕಷ್ಟು ಹಿನ್ನಡೆ ಉಂಟಾಯಿತು ಎಂದು ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಎಸ್. ಕಿವುಡಸಣ್ಣನವರ ಆರೋಪಿಸಿದರು.
ಬೆಳಗಾವಿಗೆ ನಿಗದಿಯಾಗಿದ್ದ ಹೈಕೋರ್ಟ್ ಪೀಠವನ್ನು ಧಾರವಾಡಕ್ಕೆ ಸ್ಥಳಾಂತರಿಸಿದರು ಎಂದು ತಿಳಿಸಿದರು. ಜಗದೀಶ್ ಶೆಟ್ಟರ್ ಅವರು ಬೆಳಗಾವಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಜಿಲ್ಲೆಗೆ ಸಾಕಷ್ಟು ಅನ್ಯಾಯ ಎಸಗಿದ್ದಾರೆ ಎಂದರು. ಜಿಲ್ಲೆಗೆ ಬರಬೇಕಿದ್ದ‌ ಐಐಟಿ‌ ಕಾಲೇಜು, ವಿಮಾನ ನಿಲ್ದಾಣ ವಿಸ್ತರಣೆಗೆ ಅಡ್ಡಿ ಪಡಿಸಿದರು ಎಂದು ಕಿವುಡಸಣ್ಣನವರ ಆರೋಪಿಸಿದರು.

ಈ ವೇಳೆ ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ಬಸವರಾಜ ಮುಗಳಿ, ಜಂಟಿ ಕಾರ್ಯದರ್ಶಿ ವೈ.ಕೆ.ಡಿವಟೆ, ಆರ್.ಕೆ.ಪಾಟೀಲ್, ಆರ್.ಪಿ.ಪಾಟೀಲ್, ಶೀತಲ್ ರಾಮಶೆಟ್ಟಿ, ವಿನೋಧ ಪಾಟೀಲ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಕೀಲರು ಉಪಸ್ಥಿತರಿದ್ದರು.

*ವಿನಾಯಕನಗರ, ಸೈನಿಕನಗರದಲ್ಲಿ ಮತಯಾಚನೆ*

ವಿನಾಯಕನಗರ, ಸೈನಿಕನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮತಯಾಚಿಸಿದರು. ವಿವಿಧ ಮುಖಂಡರ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಈ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ ಫಿರೋಜ್ ಸೇಠ್, ಶಾಸಕ ರಾಜು ಸೇಠ್, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article