ವಿವಿಧ ಗ್ರಾಮಗಳಲ್ಲಿ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅಬ್ಬರದ ಪ್ರಚಾರ
*ಹೊಸ ವಂಟಮುರಿ, ಹುದಲಿ ಜಿಪಂ ವ್ಯಾಪ್ತಿಯ ಅಷ್ಠೆ, ಬಂಬರಗಾ ಹಾಗೂ ಹೊನಗಾ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಪ್ರಚಾರ ಸಭೆ
ಬೆಳಗಾವಿ: ಕಳೆದ 5 ವರ್ಷ ಬಿಜೆಪಿ ಸಂಸದ ಅವರಿಗೆ ಅವಕಾಶ ನೀಡಿದ್ದಿರಿ. ಆದರೆ ನಿಮ್ಮ ನಿರೀಕ್ಷೆಯಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಅದಕ್ಕಾಗಿ ಈ ಭಾರಿ ಅಭಿವೃದ್ದಿಗೆ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಬೇಕು ಎಂದು ಚಿಕ್ಕೋಡಿ ಲೋಕಸಭಾ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಹೇಳಿದರು.
ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹೊಸ ವಂಟಮುರಿ, ಹುದಲಿ ಜಿಲ್ಲಾ ಪಂವ್ಯಾಪ್ತಿಯ ಅಷ್ಠೆ, ಬಂಬರಗಾ ಹಾಗೂ ಹೊನಗಾ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಪಕ್ಷದ ಪರ ಅಲೆಯಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆೆ. ಆದ್ದರಿಂದ ಈ ಭಾರಿ ಕ್ಷೇತ್ರದ ಮತದಾರರು ಪ್ರಜ್ಞಾವಂತಿಕೆಯನ್ನು ಮೆರೆಯಬೇಕು. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಒಂದು ಅವಕಾಶ ನನಗೂ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಬಡ ಜನರ ಸಮಸ್ಯೆ ಸ್ಪಂದಿಸದ ಬಿಜೆಪಿ: ಬಡ ಜನ, ಕಾರ್ಮಿಕರು ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಬಿಜೆಪಿ ಯಾವತ್ತು ಚರ್ಚೆ ಮಾಡಿಲ್ಲ. ಅಲ್ಲದೇ ಕೇಂದ್ರ ಸರ್ಕಾರ ಮಿತಿಮೀರಿದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಸುಳ್ಳು ಭರವಸೆ, ಜಾತಿಗಳ ಮಧ್ಯೆ ವಿಷಬೀಜ ಬಿತ್ತುವಿಕೆ, ದಿನಬಳಕೆ ವಸ್ತುಗಳ ಬೆಲೆ ಏರಿಸಿ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ವಿವಿಧ ಧರ್ಮ ಮತ್ತು ಜಾತಿಗಳ ಜನರ ನಡುವೆ ನಿರ್ಣಾಯಕ ನೀತಿ ಅನುಸರಿಸುತ್ತಿರುವ ಬಿಜೆಪಿ ಸರ್ಕಾರದ ಕೆಟ್ಟ ಆಡಳಿತದಿಂದ ರಾಜ್ಯದ ಜನರು ಬೇಸತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಆದ್ದರಿಂದ ಕೈ ಕಾರ್ಯಕರ್ತರು ಬಿಜೆಪಿಯವರ ದುರಾಡಳಿತ ಹಾಗೂ ಕಾಂಗ್ರೆಸ್ ಸಸರ್ಕಾರ ಅವಧಿಯಲ್ಲಿ ಕೈಗೊಂಡಿರುವ ಹಲವಾರು ಜನಪರ ಯೋಜನೆಗಳ ಬಗ್ಗೆ ಮನೆ ಮನೆಗೆ ತೆರಳಿ ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.
ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮತದಾರರು ಮತ ನೀಡುವಂತೆ ಕೈ ಕಾರ್ಯಕರ್ತರು ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳನ್ನು ಮನೆ ಮನೆಗೆ ತಿಳಿಸಿಬೇಕು. ಸಚಿವರಾದ ನಮ್ಮ ತಂದೆಯವರಾದ ಸತೀಶ್ ಜಾರಕಿಹೊಳಿ ಅವರನ್ನು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಚಿಕ್ಕೋಡಿ ಲೋಕಸಭೆಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಹಾಗೂ ಸುವರ್ಣ ಚಿಕ್ಕೋಡಿ ಕನಸು ನನಸು ಮಾಡಲಾಗುವುದು ಎಂದರು.
ಸಚಿವರ ಆಪ್ತ ಸಹಾಯಕ ಅರವೀಂದ ಕಾರ್ಚಿ ಮಾತನಾಡಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕಳೆದ 6 ವರ್ಷಗಳಲ್ಲಿ ಬಿಜೆಪಿ ಸಂಸದ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರದ ದುರಾಡಳಿತದಿಂದ ನೊಂದ ಜನರಿಗೆ ನಮ್ಮ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ನೆಮ್ಮದಿ ದೊರಕಿದ್ದು, ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಸಂಸದರ ವೈಫಲ್ಯಗಳನ್ನು ತಿಳಿಸಲು ಮುಂದಾಗಬೇಕು. ಅಲ್ಲದೇ ಕೈ ಅಭ್ಯರ್ಥಿ ಪ್ರಿಯಂಕಾ ಕಳೆದ ನಾಲ್ಕು ವರ್ಷಗಳಿಂದ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಈಗ ರಾಜಕೀಯ ಸೇವೆ ಮಾಡಲು ನೀವು ಅನುವು ಮಾಡಿಕೊಡಬೇಕೆಂದು ಹೇಳಿದರು.
ಇದಕ್ಕೂ ಮೊದಲು ವಿವಿಧ ಗ್ರಾಮಗಳಲ್ಲಿ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಗ್ರಾಮದ ಮಹಿಳೆಯರು ಹೂ ಮಾಲೆ ಹಾಕಿ ಸನ್ಮಾನಿಸಿದರು. ನಂತರ ವಿವಿಧ ಗ್ರಾಮಗಳಲ್ಲಿ ಆಗಮಿಸಿದ ಪ್ರಿಯಂಕಾ ಅವರಿಗೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.